Home
Responsive Image

ಕದಂಬಾಸುರ ಸಂಹಾರ

*************************

ಆಹಾ ರುದ್ರಾ | ಆಹಾ ವೀರಾ | ಅಖಂಡ ಹಲಿಗೆ | ಮಾರಾಂಕ ಖಡ್ಗ | ತ್ರಿಶೂಲ ಶಂಖು ಢಮರುಗ | ಭುಗಿಲ್ ಭುಗಿಲ್ | ಖೋ ಎಂದು ಕೂಗಿ ಕದಂಬ ರಾಕ್ಷಸನ ಮೇಲೆ ಕದನಕ್ಕೆ ನಡೆದನು | ಜಗದೊಳಗೆ ಉದ್ದಂಡ ಜಂಗುಳಿ ದೈವದ ಗಂಡ | ಭಯಂಕರ ಆರ್ಭಟದ | ಭದ್ರಕಾಳಿಯ ರಮಣ | ಆರ್ಭಟಿಸಿ | ದೈತ್ಯರ ದಂಡಿನೊಳಗೆ ನಾಟ್ಯವಾಡುತ್ತ | ಹೋಗುತ್ತಿರಲು | ಅನಂತ ಕೋಟಿ ಗುಡುಗು ಮಿಂಚು | ಸಿಡಿಲು ಎರಗಿದಂತೆ ಹದಿನೆಂಟು ಕೋಟಿ ರಾಕ್ಷಸರನ್ನು ತನ್ನ ಖಡ್ಗಕ್ಕೆ ಆಹುತಿಯನ್ನೇ ಕೊಟ್ಟು | ಮುಂದೆ ಮುಂದೆ ನಡೆದು | ಛಿಟಲ್ ಛಿಟಲ್ ಭುಗಿಲ್ ಭುಗಿಲ್ ಎಂದು ಕೂಗಿ ನಾಟ್ಯವಾಡುತ್ತಿರುವ ಶ್ರೀ ವೀರಭದ್ರನನ್ನು | ಆ ಕದಂಬ ರಾಕ್ಷಸನು ಮುನ್ನೂರು ಮುಖದಲ್ಲಿ ನಗುತ್ತಾ ಎರಡು ಸಾವಿರ ಹಸ್ತಗಳಲ್ಲಿ ಆಯುಧಗಳನ್ನು | ಧರಿಸಿ ಆ ಕದಂಬ ರಾಕ್ಷಸನು ಮುಂದಕ್ಕೆ ಬಂದು | ಶ್ರೀವೀರಭದ್ರನ ಮೇಲೆ ರಣಾಗ್ರವ ಮಾಡುವಾಗ್ಗೆ | ಆ ಕದಂಬ ರಾಕ್ಷಸನ | ಆಯುಧಗಳು | ಶ್ರೀ ವೀರಭದ್ರನ ವಜ್ರದ ಹಲಿಗೆಯ ಮೇಲೆ ಬಿದ್ದು | ಒಂದೊಂದು ಕೆಂಡಗಳು ಪರ್ವತದಂತೆ ಇದ್ದವು | ಕೆಂಡದ ಮಳೆ ಸುರಿಯುತ್ತಿರುವ ಸಮಯದಲ್ಲಿ ನಮ್ಮ ಶ್ರೀ ವೀರಭದ್ರನು | ಆ ಕದಂಬನ ರಾಕ್ಷಸನ ಎದೆಯನ್ನು ಮೆಟ್ಟಿ ಕೊಂದು | ತನ್ನ ಗರಗಸ ಕತ್ತಿಯಿಂದ | ಮುನ್ನೂರು ತಲೆಗಳನ್ನು ಸೀಳಿದನು | ನಮ್ಮ ಗಂಡುಗಲಿ ಕರವೀರಭದ್ರ | ಧಿಗಿಲ್' ಭುಗಿಲ್‌ ಎಂದು ಭಯಂಕರ ಆರ್ಭಟದಿಂದ | ಆ ದಂಡಿನೊಳಗೆ ನಾಟ್ಯವಾಡುತ್ತಿರುವ ಸಮಯದಲ್ಲಿ | ರಾಕ್ಷಸ ದಂಡಿನ ಸಮೂಹವೇ ಎಚ್ಚೆತ್ತು | ಹೇ ಸ್ವಾಮಿ ದಯಾನಿಧಿ | ನಿಮ್ಮ ಪಾದಗಳು ಸೋಂಕಿದ ಮಾತ್ರದಿಂದಲೇ ನಾವು ಪುನೀತರಾದೆವೆಂದು | ಶರಣಾಗತರಾದರು ಆಗ ನಮ್ಮ ಶ್ರೀ ವೀರಭದ್ರನು ಶರಣಾಗತರನ್ನು ರಕ್ಷಿಸಿ ಮುಂದೆ ನಡೆದನು.

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ