Home
Responsive Image

ಜ್ವಾಲಾ ವ್ಯಾಳಾಸುರ ಸಂಹಾರ

°°°°°°°°°°°°°°°°°°°°°°°°°°°°°°°°

ಆಹಾ ರುದ್ರಾ l ಆಹಾ ವೀರಾ l ಶ್ರೀ ವೀರಭದ್ರ ದೇವನು ವ್ಯಾಳಾಸುರನೆಂಬ ರಕ್ಕಸನ ಸಂಹಾರಗೈದ ಪರಿಯಂ ಪೇಳ್ವೆ | ವ್ಯಾಳಾಸುರನು ಬ್ರಹ್ಮನ ವರದಿಂದ ಸಕಲ ಲೋಕಂಗಳಿಗೆ ಮೃತ್ಯುಸ್ವರೂಪವಾಗಿ ನಿಂತಿದ್ದನು | ಎಲ್ಲ ಮುನಿಗಳು ಗರುಡ, ಗಂಧರ್ವರು | ಅಲ್ಲದೆ ಮೂವತ್ಮೂರು ಕೋಟಿ ದೇವತೆಗಳು ಈ ವಿಷಯವನ್ನು ಶ್ರೀ ಗಂಗಾಧರನಿಗೆ ತಿಳಿಸಿ ಮೊರೆಯಿಡಲಾಗಿ | ಶ್ರೀ ಶಂಕರನು ಪ್ರಸನ್ನನಾಗಿ ನಿಮ್ಮಿಚ್ಛೆ ಏನೆಂದು ಬೆಸಗೊಳ್ಳಲು | ಸಕಲ ಗಣಂಗಳು ಇಂತೆಂದರು | ವ್ಯಾಳಾಸುರನೆಂಬ ರಕ್ಕಸನು ಇಂದ್ರನ ಕವಚವನ್ನು, ಅಗ್ನಿಯ ನಾಲಿಗೆಯನ್ನು, ಯಮನ ದಂಡವನ್ನು, ವಾಯುವಿನ ಗಧೆಯನ್ನೂ, l ಕುಬೇರನ ಖಡ್ಗವನ್ನು ಇನ್ನೂ ಅನೇಕ ಶಕ್ತಿಯನ್ನು ಕುಂಠಿತಗೊಳಿಸಿರುವನೆಂದು ಹೇಳಲಾಗಿ ನಮ್ಮ ಶಿವನು ಕೇಳಿ ಹೂಂಕರಿಸುತ್ತಾ | ತನ್ನ ಪುತ್ರನಾದ ಶ್ರೀ ವೀರಭದ್ರನನ್ನು ಕರೆದು ನೀನು ಹೋಗಿ ದುಷ್ಟನಾದ ವ್ಯಾಳಾಸುರ ರಕ್ಕಸನ ಸಂಹಾರ ಗೈದು | ಸಕಲ ಜಗತ್ತಿನ ಉದ್ಧಾರಮಾಡಿ ಬಾ ಎಂದು ಅಪ್ಪಣೆ ಕೊಡಲು l ಶರಭಾವತಾರಿಯಾದ ಶ್ರೀ ವೀರಭದ್ರನು ಆರ್ಭಟಿಸಿ, ವೀರಕೇಕೆಯನ್ನು ಹೊಡೆಯಲಾಗಿ ನಕ್ಷತ್ರಗಳು ಉದುರಿದವು | ಸೂರ್ಯಚಂದ್ರರಿಗೆ ದಿಕ್ಕು ತೋಚದಂತಾಯಿತು l ಬ್ರಹ್ಮಾಂಡವು ನಡುಗಿತು. l ಸಮುದ್ರವು ಧ್ರುವಲೋಕದ ಕಡೆಗೆ ಹಾರಿತು l

ಶ್ರೀ ವೀರಭದ್ರನ ಅವತಾರವನ್ನು ಕಂಡು ವ್ಯಾಳಾಸುರನ ಎದೆಯೂ ನಡುಗಿತು | ಆದರೂ ಧೈರ್ಯಗುಂದದೆ ಸಿಂಹದ ಗವಿಗಳಿಗೆ ನರಿಯು ಬರುವಂತೆ | ಆ ಬೂದಿಬಡಕನ ಮಗನಾದ ವೀರಭದ್ರನು ಬರುವನು | ಎಲ್ಲರ ಶಕ್ತಿಯನ್ನು ಕುಂಠಿತಗೈದ ಈ ಬಹದ್ದೂರನ ಮುಂದೆ ಯಾರ ಆಟವೂ ನಡೆಯಲಾರದೆಂದು ಹೇಳುತ್ತಿರುವಷ್ಟರಲ್ಲಿ ಶ್ರೀ ವೀರಭದ್ರನು ವ್ಯಾಳನ ರಟ್ಟಿ ಹಿಡಿದು ಗುದ್ದಿದನುl ವ್ಯಾಳಾಸುರನು ವೀರೇಶನ ರಟ್ಟಿ ಹಿಡಿಯಲಾಗಿ | ಪುನಃ ವೀರೇಶನು ಅವನಿಗೆ ಗುದ್ದಿದನು | ಈ ಪ್ರಕಾರ ಅಷ್ಟವಿಶಂತಿ ದಿವಸ ಯುದ್ಧಮಾಡಲಾಗಿ l ವ್ಯಾಳಾಸುರನು ಮಾಯಾ ಯುದ್ಧವನ್ನು ಪ್ರಾರಂಭಿಸಿದನು | ಆಗ ವ್ಯಾಳಾಸುರನು ಮೇಘ ರೂಪವನ್ನು ಧರಿಸಿದನು | ಶ್ರೀ ವೀರಭದ್ರನು ಜಂಝಾ ಮಾರುತನಾದನು | ವ್ಯಾಳನು ಸಮುದ್ರನಾದನು ಶ್ರೀವೀರಭದ್ರನು ಅಗಸ್ಯನಾದನು | ಆಗ ವ್ಯಾಳನು ಸಿಂಹನಾದನು | ಕೂಡಲೇ ಶ್ರೀ ವೀರಭದ್ರನು ಶರಭನಾಗಿ ಸಿಂಹವನ್ನು ಕೊಂದನು ||

ಇದನ್ನು ನೋಡುತ್ತಿದ್ದ ಸಕಲ ದೇವತೆಗಳು ಆಕಾಶದಿಂದ ಪುಷ್ಪವೃಷ್ಟಿ ಗೈದರು | ಗಂಧರ್ವ ಸ್ತ್ರೀಯರು ನರ್ತನ ಮಾಡಿದರು | ಸಕಲ ದೇವಗಣಂಗಳು ಜಯಘೋಷ ಮಾಡಿದರು | ಮೂವತ್ಮೂರು ಕೋಟಿ ದೇವತೆಗಳು ಶ್ರೀವೀರಭದ್ರನಿಗೆ ಹೂವಿನ ಹಾರವನ್ನು ಹಾಕಿದರು | ಭದ್ರಕಾಳಿಯು ಸಾಸಿಯ ಇಟ್ಟು ಆರತಿ ಬೆಳಗಿದಳು l ಇದನ್ನು ಕಂಡು ಶ್ರೀ ಶಂಕರನು ಶ್ರೀ ವೀರೇಶನನ್ನು ರತ್ನ ಕಚ್ಚಿದ ಸಿಂಹಾಸನದಲ್ಲಿ ಕೂಡ್ರಿಸಿ | ಭಪ್ಪರ ಭಲೆರೆ ಎಂದು ಹೂಮಳೆಗರೆದನು ಕಡೆ ಕಡೆ ......

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ