Home
Responsive Image

ಹನುಮಂತನಿಗೆ ಲಿಂಗಧಾರಣೆ

°°°°°°°°°°°°°°°°°°°°°°°°°°°°

ಆಹಾ ರುದ್ರಾ | ಆಹಾ ವೀರಾ | ಒಂದಾನೊಂದು ದಿವಸ ನಮ್ಮ ಪರಶಿವಮೂರ್ತಿಯು | ಕೈಲಾಸದ ಸಭೆಯಲ್ಲಿ ಕುಳಿತಿರಲು | ಶಿವಸಭೆಗೆ ನಾರದನು ಬಂದನು | ನಾರದನು ಶಿವನಿಗೆ ನಮಸ್ಕರಿಸಿ ಕುಳಿತುಕೊಳ್ಳಲು | ಆಗ ಪಾರ್ವತಿಯು ಎಲೈ ನಾರದನೇ ಶಿವನಿಗೆ ನಮಸ್ಕರಿಸಿ | ಎನಗೆ ನಮಸ್ಕರಿಸದೆ ಕೂಡ್ರುವ ಕಾರಣವೇನೆಂದಳು | ಆಗ ಪಾರ್ವತಿಯು ಕೇಳುತ್ತಾಳೆ | ಎಲೈ ತ್ರಿಲೋಕ ಸಂಚಾರಿಯಾದ ನಾರದನೇ || ನನ್ನದೊಂದು ವಚನವಿರುವದು | ಅದನ್ನು ನಡೆಸಿ ಕೊಡುವಿಯಾ ಎಂದು ಕೇಳಲು | ನಾರದನು ನಡೆಸಿಕೊಡುವೆನೆಂದು ವಚನವಿತ್ತನು | ಆಗ ಪಾರ್ವತಿಯು ಎಲೈ ನಾರದ ಮಹರ್ಷಿಯೇ ಹರ ಮುನಿದರೂ ಗುರು ಕಾಯ್ದನೆಂಬ ವಚನವನ್ನು ಭೂಲೋಕಕ್ಕೆ ಹೋಗಿ ಸ್ಥಿರಪಡಿಸಿ ಬಾ ಎಂದು ಹೇಳಲು | ನಾರದನು ಆ ಮಾತಿಗೆ ಒಪ್ಪಿಕೊಂಡು | ಭೂಲೋಕಕ್ಕೆ ಪ್ರಯಾಣ ಬೆಳೆಸಿದನು | ಅಯೋಧ್ಯಾ ಪಟ್ಟಣದಲ್ಲಿ ಶ್ರೀರಾಮಚಂದ್ರನು | ಸೀತಾದೇವಿಯನ್ನು ಗೆದ್ದುತಂದ ಸಂತೋಷಕ್ಕಾಗಿ | ತನ್ನ ಭಕ್ತರಾದ ವೀರರಿಗೆ | ಬೇಡಿದ ಇಷ್ಟಾರ್ಥಗಳನ್ನು ಕೊಟ್ಟು ಕಳಿಸುತ್ತಿದ್ದನು | ಶ್ರೀ ರಾಮಚಂದ್ರನ ಪರಮ ಭಕ್ತನಾದ ಮಾರುತಿಯು ತಾನು ಏನಾದರೊಂದು ಇಷ್ಟಾರ್ಥವನ್ನು ಪಡೆದುಕೊಂಡು ಬರಬೇಕೆಂದು ಹೊರಟನು | ಅಯೋಧ್ಯಾ ಪಟ್ಟಣಕ್ಕೆ ಹೊರಟ ಮಾರುತಿಗೆ ನಡುಮಾರ್ಗದಲ್ಲಿ ನಾರದ ಮುನಿಯು ಭೇಟಿಯಾಗಿ ತೀವ್ರವಾಗಿ ಹೊರಡುವ ಕಾರಣವೇನೆಂದು ಕೇಳಿದನು | ಆಗ ಮಾರುತಿಯು ತನ್ನ ಗುರುವಾದ ರಾಮಚಂದ್ರನಲ್ಲಿಗೆ ಹೋಗಿ ಏನಾದರೊಂದು ಇಷ್ಟಾರ್ಥವನ್ನು ಪಡೆದುಕೊಂಡು ಬರುವುದಾಗಿ ಹೇಳಿದನು | ಆಗ ನಾರದ ಮುನಿಯು | ಎಲೈ ಆಂಜನೇಯನೇ ನನ್ನದೊಂದು ವಚನವನ್ನು ಪಾಲಿಸುತ್ತೀಯಾ | ಎಂದು ಕೇಳಲು ಅದಕ್ಕೆ ಮಾರುತಿಯು ಪಾಲಿಸುವುದಾಗಿ ಒಪ್ಪಿಕೊಂಡನು | ಆಗ ನಾರದ ಮುನಿಯು ಹೇಳುತ್ತಾನೆ | ಎಲೈ ಮಾರುತಿ ನೀನು | ಶ್ರೀರಾಮಚಂದ್ರನಲ್ಲಿ ಅಷ್ಟಲಿಂಗಾನಂದ ಭಕ್ತಿ ಹಾಗೂ ಮುಕ್ತಿ ಮಾರ್ಗವನ್ನು ಕೇಳಿಕೋ ಎಂದು ಹೇಳಲು l ಆ ಮಾತನ್ನು ಒಪ್ಪಿಕೊಂಡು ಮಾರುತಿಯು ತೀವ್ರದಿಂದ ತನ್ನ ಗುರುವಾದ ಶ್ರೀ ರಾಮಚಂದ್ರನಲ್ಲಿಗೆ ಬಂದು ಕುಳಿತಿರಲು ಶ್ರೀರಾಮನು ಅತಿ ಸಂತೋಷದಿಂದ | ಎಲೈ ಎನ್ನ ಭಕ್ತನಾದ ಮುದ್ದು ಮಾರುತಿಯೇ ನಿನಗೆ ಯಾವ ಆಭರಣ ಬೇಕೆನ್ನಲು | ಅದಕ್ಕೆ ಮಾರುತಿಯು ನನಗಾವ ಆಭರಣಗಳೂ ಬೇಡ ಅಷ್ಟಾನಂದ ಮುಕ್ತಿ ಸಾಮ್ರಾಜ್ಯವನ್ನು ದಯಪಾಲಿಸು ಎಂದು ಕೇಳಲು ಶ್ರೀರಾಮನು ಈಗ ನಾನು ನಿರತ್ವದಲ್ಲಿರುವದರಿಂದ ಅದು ನನ್ನಿಂದ ಅಸಾಧ್ಯವಿರುವದು | ಕಾರಣ ವಶಿಷ್ಠ ಗುರುಗಳಲ್ಲಿಗೆ ಹೋದರೆ | ಅದರ ಸಾಧನವನ್ನು ಹೇಳುತ್ತಾರೆಂದು ತಿಳಿಸಲು | ವಾಯು ಕುಮಾರನು ವಶಿಷ್ಠರಲ್ಲಿ ಬಂದು ನಮಸ್ಕರಿಸಲು ವಶಿಷ್ಠರು ಬಂದ ಕಾರಣವೇನೆಂದು ಕೇಳಲು ಆಗ ಮಾರುತಿಯು | ಹೇ ಸ್ವಾಮಿ ನನಗೆ ಇಷ್ಟಲಿಂಗಾನಂದ ಭಕ್ತಿ ಹಾಗೂ ಮುಕ್ತಿ ಮಾರ್ಗವನ್ನು ತೋರಬೇಕು ದೇವಾ ಎಂದು ಕೇಳಲು ಹಾಗೂ ವಶಿಷ್ಠರು-ಎಲೈ ವಾಯುಪುತ್ರನೇ ಪಂಪಾವರ ಹೇಮಕೂಟಕ್ಕೆ ಹೋಗಿ | ತುಂಗಭದ್ರೆಯಲ್ಲಿ ಸ್ನಾನಮಾಡಿ ನಾರು ಮಡಿಯನ್ನುಟ್ಟು ಶ್ರೀ ವೀರಭದ್ರನನ್ನು ಕುರಿತು ಘೋರವಾದ ತಪಸ್ಸು ಮಾಡು ಅಂದರೆ ಶ್ರೀ ವೀರಭದ್ರನು ಪ್ರತ್ಯಕ್ಷನಾಗುವನೆಂದು ಹೇಳಲು | ಆಗ ಮಾರುತಿಯು ವಶಿಷ್ಠರಿಗೆ ನಮಸ್ಕರಿಸಿ | ಹೇಮಕೂಟಕ್ಕೆ ಹೋಗಿ ಘೋರವಾದ ತಪಸ್ಸನ್ನಾಚರಿಸಲು | ವೀರಭದ್ರನು ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಎಲೈ ಭಕ್ತಶ್ರೇಷ್ಠನಾದ ಮಾರುತಿಯೇ ತಪಸ್ಸು ಮಾಡಲು ಕಾರಣವೇನೆಂದು ಕೇಳಲು | ಆಗ ಮಾರುತಿಯು ಹೇಳುತ್ತಾನೆ | ಸದ್ಗುರು ಶ್ರೇಷ್ಠನಾದ ಶ್ರೀ ವೀರಭದ್ರನೇ | ಎನಗೆ ಇಷ್ಟಾನಂದ ಮುಕ್ತಿ ಸಾಮ್ರಾಜ್ಯವನ್ನು ದಯಪಾಲಿಸಬೇಕೆಂದು ಕೇಳಿದನು | ಆಗ ಶ್ರೀ ವೀರಭದ್ರನು ಮಾರುತಿಯ ಕರದಲ್ಲಿ ಇಷ್ಟಲಿಂಗವನ್ನು ಕೊಟ್ಟು | ಎಲೈ ಭಕ್ತ ಶ್ರೇಷ್ಠನಾದ ಮಾರುತಿಯೇ ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿ ಪೂಜಿಸುತ್ತಾ ಹೋಗೆಂದು ಹೇಳಿದನು | ಅಂದಿನಿಂದ ಮಾರುತಿಯು ಶ್ರೀ ವೀರಭದ್ರನ ಪರಮ ಶಿಷ್ಯನಾದನು |

ಆಹಾ ರುದ್ರ l ಒಂದಾನೊಂದು ದಿವಸ ಗೌತಮ ಆಶ್ರಮದಲ್ಲಿ ಶಿವಯೋಗಿಯು ತನ್ನಿಷ್ಟಲಿಂಗವ ಕಳೆದುಕೊಂಡು ಲಿಂಗವ ಸಿಗದಿದ್ದರಿಂದ ಗಂಡುಗತ್ತರಿ ಹೂಡಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಸಿದ್ಧನಾಗಿರುವ ಸಮಯದಲ್ಲಿ l ಶಿವನು ಪ್ರತ್ಯಕ್ಷನಾಗಿ ಇಷ್ಟಲಿಂಗವನ್ನು ದಯಪಾಲಿಸಿ ಹೊರಡುವ ಸಮಯದಲ್ಲಿ | ಗೌತಮ ಮುನಿಯು ಸರ್ವರಿಗೂ ಔತಣ ಸಮಾರಂಭವನ್ನೇರ್ಪಡಿಸಲು | ಸರ್ವರೂ ಔತಣ ಮುಗಿಸಿದ ನಂತರ ಪರಮೇಶ್ವರನ ಸಮ್ಮುಖದಲ್ಲಿ ಮಾರುತಿಯ ಗಾಯನ ಮಾಡುತ್ತಿರಲು ಪರಮೇಶ್ವರನಿಗೆ ಸಂತೋಷವಾಗಿ l ಎಲೈ ವಾಯುಪುತ್ರನೇ ಇದೇ ರಾಗ ಗೀತೆಗಳಿಂದ ನನ್ನನ್ನು ಕೈಲಾಸಕ್ಕೆ ಕಳಸಿಬರಬೇಕೆಂದು ಹೇಳಲು ಅದಕ್ಕೆ ವಾಯು ಕುಮಾರನು ಒಪ್ಪಿಕೊಂಡು. ಒಂದು ಹೆಗಲಮೇಲೆ ಪರಮೇಶ್ವರನನ್ನು | ಮತ್ತೊಂದು ಹೆಗಲಿನಲ್ಲಿ ಪಾರ್ವತಿಯನ್ನು ಹೊತ್ತುಕೊಂಡು ಕೈಲಾಸ ಮಾರ್ಗವಾಗಿ ಹೊರಟನು | ಆಗ ಮಾರುತಿಗೆ ಲಿಂಗ ಪೂಜೆಯ ವೇಳೆಯಾಗಲು ಶಿವ ಪಾರ್ವತಿಯರನ್ನು ಕೆಳಗಿಳಿಸಿ | ಹೇ ಸ್ವಾಮಿ ನನ್ನ ಲಿಂಗಪೂಜೆಯ ವೇಳೆಯಾಗಿದೆ l ಆದ್ದರಿಂದ ಪಂಪಾವರ ಹೇಮಕೂಟಕ್ಕೆ ಹೋಗಿ | ನನ್ನ ಲಿಂಗಪೂಜೆಯನ್ನು ತೀರಿಸಿಕೊಂಡು ಬರುತ್ತೇನೆ | ಅಪ್ಪಣೆಯನ್ನು ದಯಪಾಲಿಸೆಂದು ಕೇಳಲು | ಅದಕ್ಕೆ ಶಿವನು ಎಲೈ ಭಕ್ತನಾದ ಮಾರುತಿಯೇ ಲಿಂಗಮಯನಾದ ನಾನೇ ನಿನ್ನ ಹತ್ತಿರ ಇರುವಾಗ | ನಿನಗೆ ಲಿಂಗಪೂಜೆಯ ಅವಶ್ಯವಿಲ್ಲವೆಂದು ಹೇಳಲು | ಆಗ ಮಾರುತಿಯು ಗುರುವಿನ ಆಜ್ಞಾನುಸಾರವಾಗಿ ನನ್ನ ಲಿಂಗಪೂಜೆಯನ್ನು ಮಾಡಬೇಕೆಂದು ಹೇಳಲು ಆಗ ಶಿವನು ಹೇಳಿದ್ದೇನೆಂದರೆ ಎಲೈ ಮಾರುತಿಯೇ ನಿನ್ನ ಗುರುವಿನ ತಂದೆಯ ನಾನಿರುವಾಗ | ನಿನಗೆ ಲಿಂಗಪೂಜೆಯೇ ಬೇಡವೆಂದು ಹೇಳಿದನು | ಆಗ ಮಾರುತಿಯು ನನ್ನ ಗುರುವಿನ ತಂದೆ ನೀನಾದರೂ | ನನ್ನ ಗುರುವಿನಾಜ್ಞೆಯನ್ನು ಮೀರುವದಿಲ್ಲವೆಂದು ಹೇಳಿ ಪಂಪಾವರ ಹೇಮಕೂಟಕ್ಕೆ ಹೋದನು । ಇದರಿಂದ ಕೋಪಗೊಂಡ ಶಿವನು ಮಾರುತಿಯ ಇಷ್ಟಲಿಂಗವನ್ನು ಮಾರುತಿಗೆ ಗೊತ್ತಾಗದಂತೆ ಸೆಳೆದುಕೊಂಡನು | ಮಾರುತಿಯು ತುಂಗಭದ್ರೆಯೋಳ್ ಸ್ನಾನಮಾಡಿ | ನಾರುಮಡಿಯನ್ನುಟ್ಟು | ತನ್ನ ಲಿಂಗದ ಕರುಡಿಗೆಯನ್ನು ತೆಗೆದು ನೋಡಲು ಅಲ್ಲಿ ಲಿಂಗವಿಲ್ಲದಿರಲು ತುಂಗಭದ್ರೆಯಲ್ಲಿ ಸಿಡಿದು ಹೋಗಿರಬಹುದೆಂದು | ತುಂಗಭದ್ರೆಯ ನೀರನ್ನೇ ಉಗ್ಗಿ ಉಬ್ಬಿ ನೋಡಿದನು | ಬ್ರಹ್ಮಾಂಡದೊಳಗೇನಾದರೂ ಸಿಡಿದು ಹೋಗಿರಬಹುದೆಂದು ಬ್ರಹ್ಮಾಂಡವನ್ನೇ ಜಿಗಿದುಜಿಗಿದು ಹೋಳು ಮಾಡಿ ನೋಡಲು ಎಲ್ಲಿಯೂ ಮಾರುತಿಯ ಇಷ್ಟಲಿಂಗವು ದೊರೆಯಲಿಲ್ಲ | ಆಗ ಮಾರುತಿಯು ನಿರುಪಾಯನಾಗಿ ಶ್ರೀ ವೀರಭದ್ರನನ್ನು ಕುರಿತು | ಘೋರವಾದ ತಪಸ್ಸನ್ನು ಮಾಡಿದನುl ಆಗ ಶ್ರೀ ವೀರಭದ್ರನು ಪ್ರತ್ಯಕ್ಷನಾಗಿ ಎಲೈ ಭಕ್ತನಾದ ಮಾರುತಿಯೇ ತಪಸ್ಸು ಮಾಡಲು ಕಾರಣವೇನೆಂದು ಕೇಳಲು | ಆಗ ಮಾರುತಿಯು ಗುರು ಶ್ರೇಷ್ಠನಾದ ಶ್ರೀವೀರಭದ್ರನೇ ನೀನು ದಯಪಾಲಿಸಿದ ಇಷ್ಟಲಿಂಗವು ಮಾಯವಾಗಿರುವದು | ಇಷ್ಟಲಿಂಗವನ್ನು ದೊರಕಿಸಿ ಎನ್ನನ್ನು ಉದ್ಧಾರ ಮಾಡಬೇಕು ದೇವಾ ಎಂದು ಶ್ರೀ ವೀರಭದ್ರನ ಪಾದಕ್ಕೆರಗಲು | ಆಗ ರುದ್ರನು ಎಲೈ ಸದ್ಭಕ್ತನಾದ ಮಾರುತಿಯೇ ಹೆದರಬೇಡ | ನಿನ್ನ ಇಷ್ಟಲಿಂಗವನ್ನು ಮುಕ್ಕಾಲು ಮೂರುಗಳಿಗೆಯೊಳಗಾಗಿ ತಂದುಕೊಡುತ್ತೇನೆಂದು ಶಪಥ ಮಾಡಿ | ತನ್ನ ಅಗ್ನಿನೇತ್ರವನ್ನು ಕರೆದು ಮಾರುತಿಯ ಇಷ್ಟಲಿಂಗವನ್ನು ಹುಡುಕಿ ತರಲು ತಿಳಿಸಿದನು | ಶ್ರೀ ವೀರಭದ್ರನು ಬಿಟ್ಟ ನೇತ್ರವು ಬ್ರಹ್ಮಾಂಡವನ್ನು ಹುಡುಕಿ ತರಲು ಹೊರಟಿತು | ಶ್ರೀ ವೀರಭದ್ರನು ಬಿಟ್ಟ ನೇತ್ರವು ಬ್ರಹ್ಮಾಂಡವನ್ನೇ ನಡುಗಿಸಹತ್ತಿತು | ಆಗ ಪಾರ್ವತಿಯು ಶಂಕರನಿಗೆ ಹೇಳುತ್ತಾಳೆ l ಎಲೈ ಶಂಭುವೇ ನೋಡು ನೋಡು ಮಾರುತಿಯ ಗುರುವಾದ | ವೀರಭದ್ರನ ಅಗ್ನಿ ನೇತ್ರವು ಜಗತ್ತನ್ನೇ ಸುಡುತ್ತಾ ಬರುತ್ತಿರುವುದು ಮಾರುತಿಯ ಇಷ್ಟಲಿಂಗವನ್ನು ಕೊಟ್ಟು ಬಿಡು ಎಂದು ಹೇಳಲು | ಪರಶಿವಮೂರ್ತಿಯು ಸಹ ತನ್ನ ಅಗ್ನಿನೇತ್ರವನ್ನು ಕರೆದು | ವೀರಭದ್ರನ ಅಗ್ನಿನೇತ್ರದೊಡನೆ ಘೋರವಾದ ಕಾಳಗ ಮಾಡಿ ಬರಲು ಕಳಿಸಿದನು l ಅವೆರಡೂ ಅಗ್ನಿನೇತ್ರಗಳ ಕಾಳಗದಿಂದ ಬ್ರಹ್ಮಾಂಡವೇ ದಹಿಸುತ್ತಿತ್ತು l ಆಗ ಪಾರ್ವತಿಯು ಹೇ ಶಂಕರನೇ ಬ್ರಹ್ಮಾಂಡವೇ ಸುಟ್ಟು ಹೋದರೆ ನಾವಿರುವದೆಲ್ಲಿ ? ಕೂಡಲೇ ವೀರಭದ್ರನ ಭಕ್ತನಾದ ಮಾರುತಿಯ ಲಿಂಗವನ್ನು ಕೊಟ್ಟು ಬಾ ಎಂದು ತಿಳಿಸಲು ಕೂಡಲೇ ಶಂಭುವು ಮಾರುತಿಯ ಬಳಿಗೆ ಬಂದು ಎಲೈ ಮಾರುತಿಯೇ ನಿನ್ನ ಇಷ್ಟಲಿಂಗವನ್ನು ತೋರಿಸೆಂದು ಕೇಳಲು | ಮಾರುತಿಯು ಹೇ ಶಂಭುವೇ ಎನ್ನ ಗುರುವಿನ ಅಪ್ಪಣೆಯಾದರೆ ಮಾತ್ರ ಇಷ್ಟಲಿಂಗವನ್ನು ತೋರಿಸುತ್ತೇನೆ. ಇಲ್ಲವಾದರೆ ಇಲ್ಲವೆನ್ನಲು ಆಗ ಶ್ರೀ ವೀರಭದ್ರನು ಎಲೈ ಭಕ್ತನಾದ ಮಾರುತಿಯೇ ಪರಮಾತ್ಮನಿಗೆ ರೋಮಕ್ಕೊಂದು ಕೋಟಿ ಲಿಂಗಗಳನ್ನು ತೋರಿಸಂದನು ಆಗ ಮಾರುತಿಯು | ತನ್ನ ಗುರುವಾದ ಶ್ರೀ ವೀರಭದ್ರನ ಅಪ್ಪಣೆಯಂತೆ ರೋಮಕ್ಕೊಂದು ಕೋಟಿ ಲಿಂಗಗಳನ್ನು ಮಾಡಿ ತೋರಿಸಿದನು l ಅಂದಿನಿಂದ ಹರಮುನಿದರೂ ಗುರು ಕಾಯ್ದನೆಂಬ ವಚನವು ಸ್ಥಿರವಾಯಿತು ದೇವಾ | ಭದ್ರಕಾಳಿಯ ರಮಣ ಭಕೋದ್ಧಾರಕ ಶ್ರೀ ವೀರಭದ್ರ | ಕಡೆ ಕಡೆ.....

ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ