Home
Responsive Image

ಶರಭ ಸಾಳ್ವಾವತಾರ

°°°°°°°°°°°°°°°°°°°°°°°°°°°

ಶರಭ ಎಂದರೆ ಎಂಟು ಕಾಲುಳ್ಳ ಪ್ರಾಣಿ, ಮೃಗಗಳಲ್ಲಿ ಶ್ರೇಷ್ಠವಾದ ಪ್ರಾಣಿ. ಸಿಂಹಕ್ಕಿಂತ ಕೋಪವುಳ್ಳ, ಆನೆಗಿಂತ ಶಕ್ತಿಯುತ ಪ್ರಾಣಿ. ಸಾಳ್ವಪಕ್ಷಿ ಎಂದರೆ ಎರಡು ತಲೆಯುಳ್ಳ ಗಂಡಭೇರುಂಡ ಪಕ್ಷಿ. ಪಕ್ಷಿಗಳಲ್ಲಿ ಶ್ರೇಷ್ಠವಾದ ಪಕ್ಷಿ ಇದನ್ನು ಪಕ್ಷಿರಾಜ ಎಂದು ಕರೆಯುತ್ತಾರೆ. ಇವೆರಡರ ಸಮನ್ವಯವಾದ ಅವತಾರವೇ ಶರಭ ಸಾಳ್ವಾವತಾರ. ಇದು ವೀರಭದ್ರನ ಮತ್ತೋಂದು ಅವತಾರ. ಇದನ್ನು ಪರಶಿವನ ಪಂಚವಿಶಂತಿ ಲೀಲೆಗಳಲ್ಲಿ ೧೨ನೇ ಲೀಲೆ ಎಂದು ಕರೆಯುತ್ತಾರೆ.

ಬ್ರಹ್ಮನ ಮಾನಸ ಪುತ್ರನಾದ ಕಶ್ಯಪ ಬ್ರಹ್ಮನಿಗೆ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಮಕ್ಕಳು ಜನಿಸಿದರು. ಹಿರಣ್ಯಾಕ್ಷನು ವಿಷ್ಣುವಿನ ಪತ್ನಿಯಾದ ಭೂದೇವಿಯನ್ನು ಹೊತ್ತೈದನು. ಇದರಿಂದ ಕೋಪಗೊಂಡ ವಿಷ್ಣುವು ವರಾಹ ಅವತಾರವನ್ನು ತಾಳಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಕಾಪಾಡಿಕೊಂಡುನು. ಇತ್ತ ಹಿರಣ್ಯಕಶಿಪನು ಸಹೋದರನ ಸಾವಿಗೆ ಕಾರಣನಾದ ವಿ‌ಷ್ಣುವನ್ನು ಮುಗಿಸಲು ಬ್ರಹ್ಮ ದೇವರನ್ನು ಕುರಿತು ಘೋರವಾದ ತಪಸ್ಸು ಮಾಡಿದನು. ದೈತ್ಯನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು. ನಿನಗೆ ಯಾವ ವರ ಬೇಕೆನಲು ಆಗ ದೈತ್ಯನು, ಯಾವ ಅಸ್ತ್ರ-ಶಸ್ತವಿಲ್ಲದೆ, ಹಗಲು-ರಾತ್ರಿಯಲ್ಲಿ , ದೇವ- ದಾನವರಿಂದಲೂ, ನರ-ಮೃಗರಿಂದಲೂ ನನಗೆ ಮರಣ ಬಾರದಂತೆ ವರಪಡೆದುಕೊಂಡನು.

ಬ್ರಹ್ಮದೇವರಿಂದ ವರವನ್ನು ಪಡೆದ ಅತ್ಯುಗ್ರ ದೈತ್ಯನಾದ ಹಿರಣ್ಯಕಶಿಪನು ಸಕಲ ದೇವಾದಿದೇವತೆಗಳೂ ಬಾಧೆಯನ್ನು ಕೊಡುತ್ತಿರಲಾಗಿ ಆ ಬಾಧೆಯನ್ನು ತಾಳಲಾರದೆ ಎಲ್ಲಾ ಲೋಕದ ಜನರು ಕೈಲಾಸಕ್ಕೆ ಹೋಗಿ ಶಿವದೋ, ಶಿವದೋ, ಶಿವದೋ ಎಂದು ಹರನಿಗೆ ಮೊರೆಯಿಟ್ಟರು. ಆಗ ಹರನು ಹರಿಯನ್ನು ಕರೆದು ಹಿರಣ್ಯಕಶಿಪನ ಸಂಹರಿಸಿ ಬಾ ಎಂದು ಅಪ್ಪಣೆ ಕೊಟ್ಟನು

ಹಿರಣ್ಯಕಶಿಪನು ವಿಷ್ಣುವನ್ನು ಕೊಲ್ಲಲು ಇಡೀ ಬ್ರಹ್ಮಾಂಡವನ್ನೇ ಭೇದಿಸಿ ಹುಡುಕಿದರೂ ಸಿಗದಾಗ ವಿಷ್ಣು ಬಹುಶಃ ಸುತ್ತು ಹೋಗಿರಬಹುದು ಎಂದು ತಿಳಿದುಕೊಂಡು ತನ್ನ ರಾಜ್ಯಭಾರ ಮಾಡುತ್ತಿದ್ದನು. ವಿಷ್ಣುವಿನ ಧ್ಯಾನ ಮಾಡಿದರೆ ತೊಂದರೆ ಕೊಡುತ್ತಿದ್ದನು. ತಾನೇ ದೇವರೆಂದು ತಿಳಿದು ತನ್ನ ವಿಗ್ರಹದ ಪೂಜೆಯನ್ನು ಪ್ರಜೆಗಳಿಂದ ಮಾಡಿಸುತ್ತಾ ನಿಶ್ಚಿಂತೆಯಿಂದ ಇದ್ದನು. ಕೆಲವು ದಿನಗಳ ಬಳಿಕ ಹಿರಣ್ಯಕಶಿಪುವಿಗೆ ಒಬ್ಬ ಮಗನು ಹುಟ್ಟಿದನು. ಅತನ ಹೆಸರೇ ಪ್ರಹ್ಲಾದ. ಪ್ರಹ್ಲಾದನು ಬೆಳೆಯುತ್ತಾ ಹೋದಂತೆ ವಿಷ್ಣುವಿನ ಧ್ಯಾನ ಮಾಡಲು ಪ್ರಾರಂಭಿಸಿದನು. ದಿನಕಳೆದಂತೆ ವಿಷ್ಣುವಿನ ಭಕ್ತನಾದ. ಇದನ್ನು ಗಮನಿಸಿದ ಹಿರಣ್ಯಕಶಿಪು ಮಗನಿಗೆ ಘೋರವಾದ ಶಿಕ್ಷೆಯನ್ನು ಕೊಟ್ಟುನು. ಆನೆಯ ಕಾಲಲ್ಲಿ ತುಳಿಸಿದನು, ಬೆಟ್ಟದ ತುದಿಯಿಂದ ಪ್ರಪಾತಕ್ಕೆ ದೂಕಿದರೂ ಪ್ರಹ್ಲಾದನು ಹರಿನಾಮಸ್ಮರಣೆ ಬಿಡದೆ, ಬದುಕಿದೆನು. ಕೊನೆಗೆ ತನ್ನ ಪತ್ನಿಯಿಂದ ವಿಷ ಪ್ರಾಶನ ಮಾಡಿಸಿದರೂ ಪ್ರಹ್ಲಾದನು ಸಾಯಲಿಲ್ಲ. ಆಗ ಹಿರಣ್ಯಕಶಿಪು ಮಗನಿಗೆ ನಮ್ಮ ಸಹೋದರನ ಸಾವಿಗೆ ಕಾರಣನಾದ ವಿಷ್ಣುವನ್ನು ಧ್ಯಾನ ಮಾಡಬಾರದೆಂದು ಎಷ್ಟು ಹೇಳಿದರೂ ಕೇಳಲಿಲ್ಲ. ಸಕಲ ಚರಾಚರ ವಸ್ತುಗಳಲ್ಲಿ ಅಡಗಿರುವನೆಂದು ನಿನ್ನಲ್ಲಿ, ನನ್ನಲ್ಲಿ ಹರಿಯು ಇದ್ದಾನೆಂದು ಹೇಳಿದನು. ಆಗ ಹಿರಣ್ಯಕಶಿಪು ಮಗನಿಗೆ ಈ ಕಂಭದಲ್ಲಿಯು ಇದ್ದಾನಯೆ? ಎಂದು ಕೇಳಿದಾಗ ಅಲ್ಲಿಯೂ ಹರಿ ಇದ್ದಾನೆಂದು ಪ್ರಹ್ಲಾದನು ಹೇಳಿದನು. ಆಗ ಹಿರಣ್ಯಕಶಿಪು ಅರಮನೆಯ ಕಂಬವನ್ನು ತನ್ನ ಗದೆಯಿಂದ ಹೊಡೆದಾಗ ಕಂಬದಿಂದ ಘೋರತರವಾದ ನಾರಸಿಂಹನು ಪ್ರಕಟಗೊಂಡನು. ಆಗ ಹಿರಣ್ಯಕಶಿಪು ಮಗನನ್ನು ನೋಡಿ ಬಿಟ್ಟರೆ ಮಗನೆ ನಮ್ಮ ಧೈತ್ಯರ ವೈರಿಯಾದ ವಿಷ್ಣುವನ್ನು ಹದಿನಾಲ್ಕು ಲೋಕಗಳು ಹುಡುಕಿದರೂ ನನಗೆ ಸಿಗಲಿಲ್ಲ. ನೀನು ಹರಿಯನ್ನು ತೋರಿಸಿದೆ ಭಲೇ ಕುಮಾರ ಭಲೇ ಎಂದು ಮಗನನ್ನು ಹೊಗಳಿದನು. ಕೂಡಲೇ ನಾರಸಿಂಹನು ಹಿರಣ್ಯಕಶಿಪನನ್ನು ತನ್ನ ತೊಡೆಯ ನಡುಹಸ್ತದೊಳು ಕೆಡಹಿ ತನ್ನ ಹದವಾದ ಉಗುರಿನಿಂದ ಹಿರಣ್ಯಕಶಿಪನ ಕರುಳನ್ನು ಬಗೆದು, ರಕ್ತವನ್ನು ಕುಡಿದು ಹಿರಣ್ಯಕಶಿಪನನ್ನು ಸಂಹರಿಸಿದನು.

ನಾರಸಿಂಹನು ರಾಕ್ಷಸನ ರಕ್ತಪಾನ ಮಾಡಿದರಿಂದ ನಾರಸಿಂಹನು ರಾಕ್ಷಸ ಪ್ರವೃತ್ತಿಗೆ ಇಳಿದನು. ತನ್ನ ತಾನು ಮರೆತು. ದೇವನೆಂಬುದು ಮರೆತು ದಾನವನಂತೆ ಕಂಡ ಕಂಡವರ ರುಂಡವನ್ನು ಕತ್ತರಿಸಿ ಲೋಕ ಸಂಹಾರ ಮಾಡತೊಡಗಲು, ಆಗ ಭಯಗ್ರಸ್ತರಾದ ದೇವತೆಗಳು ಹವ್ವಾರೆ ಎಂದು ನಮ್ಮ ಶಿವನಿಗೆ ಮೊರೆಯಿಟ್ಟರು. ಆಗ ಶಿವನು ವೀರಭದ್ರನನ್ನು ಕರೆದು ನಾರಸಿಂಹನಿಗೆ ಬುದ್ಧಿ ಹೇಳಿ ಕರೆದು ಬಾ , ಕೇಳದೇ ಪಕ್ಷದಲ್ಲಿ ಶರಭ ಸಾಳ್ವಾವತಾರ ತಾಳಿ ಸಂಹರಿಸಿ ಬಾ ಎಂದು ಅಪ್ಪಣೆ ಕೊಟ್ಟನು.

ವೀರಭದ್ರನು ನಾರಸಿಂಹನಿಗೆ ವಿಧವಿಧವಾದ ಬುದ್ಧಿ ಹೇಳಿದನು. ವೀರಭದ್ರನ ಮಾತಿಗೆ ಮನ್ನಣೆ ಕೊಡದೆ ನಾರಸಿಂಹನು ವೀರಭದ್ರನ ಮೇಲೆರಗಲು, ಆಗ ವೀರಭದ್ರನು ರೌದ್ರಾವೇಶದಿಂದ ಶರಭ ಸಾಳ್ವಾವತಾರ ತಾಳಿ ನಾರಸಿಂಹನನ್ನು ಬಾಲದಿಂದ ಕಟ್ಟಿ . ಎರಡು ಕಾಲುಗಳಿಂದ ಕುಟ್ಟಿ ಕುಟ್ಟಿ ನೆಲಕ್ಕೊಗೆದು ನಾರಸಿಂಹನ ಸಂಹಾರ ಮಾಡಿ ಅವನ ಚರ್ಮ ಸುಲಿದು ತನ್ನ ಉಡುಗೆಯನ್ನಾಗಿ ಮಾಡಿದನು. ಅವನ ಮುಖವನ್ನು ಕಾಶಿಯ ಕಟ್ಟಿದನು. ನಾರಸಿಂಹನ ಮುಖ ಕೀರ್ತಿ ಮುಖ ಎಂದು ಹೆಸರಾಯಿತು. ಕಾಶಿಯನ್ನು ಕಟ್ಟಿಕೊಂಡು ವೀರಭದ್ರನು ಕೈಲಾಸಕ್ಕೆ ಬರಲು ದೇವಾಧಿ ದೇವತೆಗಳು ಪುಷ್ಪ ವೃಷ್ಟಿಗೈದರು.

ಶರಭ ಸಾಳ್ವಾವತಾರದ ಸಂಕೇತವಾಗಿ ವೀರಭದ್ರನ ದೇವಾಲಯಗಳಲ್ಲಿ ಗಂಡ ಭೇರುಂಡ ಶಿಲ್ಪಕಲೆಗಳು ಮೂಡಿ ಬಂದಿವೆ. ಮೈಸೂರಿನ ಒಡೆಯರು ಗಂಡ ಭೇರುಂಡವನ್ನು ವಿಜಯ ಪತಾಕೆಯ ವಿಜಯ ಸಂಕೇತವಾಗಿ ರಾಜ್ಯ ಲಾಂಛನವಾಗಿ ಮಾಡಿದ್ದಾರೆ. ಮುಂದೆ ಕರ್ನಾಟಕ ರಾಜ್ಯ ಲಾಂಛನವಾಗಿರುವುದು ನಮ್ಮ ಹೆಮ್ಮೆಯ ವಿಚಾರ ಎಂದು ಹೇಳುವುರಲ್ಲಿ ಯಾವ ಸಂಶಯವೂ ಇಲ್ಲ.

ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ